ಆತ ಅಹಂಕಾರದ ಅಂಗಿ ತೊಟ್ಟಿದ್ದ ಆತನ ಅರಿವು ಆರಿ ಹೋಗಿತ್ತು ..!

ಆಧ್ಯಾತ್ಮಿಕ

ಆತ ಬದುಕಿನಲ್ಲಿ ವೇದ-ವೇದಾಂತ ಬಲ್ಲವನಾಗಿ ಆತ್ಮಜ್ಞಾನದಿಂದ ಅಹಂ ಬ್ರಹ್ಮಾಸ್ಮಿ ಅರಿತುಕೊಂಡಿದ್ದ. ತತ್ಮಮಸಿಯ ತತ್ವ ತಿಳಿದುಕೊಂಡು ಪ್ರಖರ ಪಾಂಡಿತ್ಯ ಬಲ್ಲವನಾಗಿದ್ದ ಆತನ ವಾಗ್ಝರಿಯ ವಾಣಿಗಳು ಸುರಿಮಳೆಯಾಗಿ ಸುರಿದರೇ ವಿದ್ವತ್ವ ಹೊಳೆಯಾಗಿ ಹರಿಯುತ್ತಿತ್ತು.

ಶ್ವೇತಕೇತುವಿನ ತಂದೆ ಅತ್ಯಂತ ಶ್ರೇಷ್ಠ ವಿದ್ವಾಂಸನಾಗಿದ್ದರೂ ಕೂಡಾ ಮಗನನ್ನು ಒಬ್ಬ ಯೋಗ್ಯವಾದ ಗುರುಗಳ ಹತ್ತಿರ ಗುರುಕುಲಕ್ಕೆ ವಿದ್ಯಾ ಬುದ್ದಿಯನ್ನು ಕಲಿಯಲು ಕಳುಹಿಸಿದ್ದರು. ಹಲವು ವರ್ಷಗಳ ಕಾಲಚಕ್ರದ ನಂತರ ಶ್ವೇತ ಕೇತು ಸಕಲ ವಿದ್ಯೆಯನ್ನು ಕಲಿತು ಗುರುಗಳಿಂದ ಆಶೀರ್ವಾದ ಪಡೆದು ಮಹಾನ ಮೇಧಾವಿಯಾಗಿ ಮನೆ ಕಡೆ ಸಾಗಿದ.

ಶ್ವೇತ ಕೇತು ತಂದೆಗೆ ತಾನು ಅತ್ಯಂತ ಶ್ರೇಷ್ಠವಾದ ಪದವಿ ಪಡೆದು ಪ್ರಪಂಚದಲ್ಲಿಯೇ ಅತ್ಯಂತ ಜಾಣನಾಗಿರುವ ವ್ಯಕ್ತಿ ಎಂಬುವದನ್ನು ತೋರಿಸುವ ಸಲುವಾಗಿಯೇ, ಊರಿನ ಕಡೆ ಬರುತ್ತಿದ್ದ ಇದೆಲ್ಲವು ಒಂದು ಕಡೆಯಾದರೇ ಇತ್ತ ಮನೆಯಲ್ಲಿ ತಂದೆ ಜಾಣನಾಗಿ ಬರುವ ಮಗನ ಬರುವಿಕೆಯನ್ನು ಚಾತಕ ಪಕ್ಷಿಯಂತೆ ಕಾಯುತ್ತಿದ್ದ. 

ದೂರದ ಬೀದಿಯಲ್ಲಿ ಅತ್ಯಂತ ಹಮ್ಮು ಬಿಮ್ಮುಗಳಿಂದ ಬರುತ್ತಿದ್ದ ಮಗನನ್ನು ಕಿಟಕಿಯಿಂದ ನೋಡಿದ. ದೂರದಿಂದಲೇ, ಮಗನ ನಡವಳಿಕೆ ಕಂಡು ಮಗನ ಪ್ರತಿ ಹೆಜ್ಜೆ, ಆತನ ಪ್ರತಿ ಪದವಿ ತೋರಿಸುತ್ತಿದ್ದರೆ ಮಗ ನಡೆಯುವ ರೀತಿ ನೀತಿಯನ್ನು ನೋಡಿದರೇ ಆತ ಅಹಂಕಾರದ ಮೊಟ್ಟೆಯಾಗಿದ್ದ ಇದನ್ನು ಕಂಡ ತಂದೆ ಗದ್ಗದಿತನಾಗಿ ತುಂಬಾ ದುಃಖ ತಂದುಕೊಂಡ ಏಕೆಂದರೆ ಗುರುಕುಲದಲ್ಲಿ ಗುರಗಳಿಂದ ಯಾವ ಪದವಿ-ಪುರಸ್ಕಾರ-ಪಾರಿತೋಷಕ ಪಡೆದುಕೊಂಡಿದ್ದನೋ, ಅಂತಹ  ಮಗ ಈಗ ಅಹಂಕಾರದ ಅಂಗಿ ತೊಟ್ಟು ಅರಿವು ಎನ್ನವ ವಿನಯ  ಆರಿ ಹೋಗಿತ್ತು ಅದು ಮಾಸಿ ಹೋಗಿ ಅವನಲ್ಲಿ ಸಂಪೂರ್ಣವಾಗಿ ಒಣಗಿ ಹೋಗಿತ್ತು. ಆತನಲ್ಲಿ ತಂದೆ ಕಂಡಿದ್ದು ಒಂದೇ ಒಂದು ಗುಣ ಅಹಂಕಾರ.

ಮನೆಗೆ ಬಂದ ಮಗ ತಂದೆಗೆ ತನ್ನ ಪಾಂಡಿತ್ಯವನ್ನು ತೋರಿಸುತ್ತಾನೆ. ಇದಕ್ಕೆ ಪ್ರತಿಯಾಗಿ ತಂದೆ ಯಾವ ಕಾರಣಕ್ಕೆ ದುಃಖಿತನಾದ ಸಂಗತಿಗೆ ಎಂಬ ಕಾರಣವನ್ನು ಹೇಳಲು ಒತ್ತಾಯಿಸುತ್ತಾನೆ. ಆಗ ತಂದೆ ನೀನು ಗುರುಕುಲದಲ್ಲಿ ಗುರುಗಳಿಂದ ಏನನ್ನು ಕಲಿಯಬೇಕಾಗಿತ್ತು ಅದನ್ನು ಕಲಿತಿರುವದಿಲ್ಲ.! ಈಗ ನಿನ್ನ ಗುರುಗಳಿಗೆ  ಹೋಗಿ ಹೇಳು ನಮ್ಮ ತಂದೆ ನನಗೆ ನೀವು ಏನನ್ನು ಕಲಿಸಲಿಲ್ಲವೋ, ಅದನ್ನು ಕಲಿಸಲು ಹೇಳಿದ್ದಾರೆ.! ಎಂದು.

ತಂದೆಯ ಮಾತು ಕೇಳಿದ ಮಗನಿಗೆ ದಿಗ್ಬ್ರಾಂತಿ ಬಡಿಯುತ್ತದೆ.

ಗುರುಗಳ ಹತ್ತಿರ ಬಂದ ಶ್ವೇತಕೇತು ನನ್ನ ತಂದೆ ನೀವು ಇದುವರೆಗೂ ನನಗೆ ಏನನ್ನು ಕಲಿಸಿಲ್ಲವೋ, ಅದನ್ನು ಕಲಿಸಿರಿ.! ಎಂದಿದ್ದಾರೆ ಎಂದನು. ಆಗ ಗುರುಗಳು ಅದನ್ನು ಕಲಿಸಲಾಗುವದಿಲ್ಲ.! ಅದನ್ನು ನಾವಾಗಿಯೇ ಕಲಿಯಬೇಕು.! ನಾನು ನಿನಗೆ ಕೇವಲ ಮಾರ್ಗದರ್ಶಕ.! ಎಂದರು.

ಮುಂದುವರೆದ ಗುರುಗಳು ಶ್ವೇತ ಕೇತುವಿಗೆ ಒಂದಿಷ್ಟು ಆಕಳುಗಳನ್ನು ಕೊಡುತ್ತಾರೆ ಗೋವುಗಳನ್ನು ಕೊಟ್ಟ ಗುರುಗಳು ಶಿಷ್ಯನಿಗೆ ಒಂದು ಷರತ್ತನ್ನು ಹಾಕುತ್ತಾರೆ.

ಈಗಿರುವ ನೂರು ಗೋವುಗಳು ಒಂದು ಸಾವಿರ ಗೋವುಗಳಾಗುವರೆಗೂ ನೀನು ಇವಗಳನ್ನು ಕಾನನಕ್ಕೆ ಒಯ್ದು ಕಾಯಬೇಕು.! ನೀನು ಅಲ್ಲಿಯವರೆಗೆ ಕಾಡಿನಿಂದ ನಾಡಿಗೆ ಬರಬೇಡ.! ಎಂದರು.

ಗುರಗಳ ಮಾತಿನಂತೆ ಅಭಯಾರಣ್ಯಕ್ಕೆ ಗೋವುಗಳೊಂದಿಗೆ  ತೆರಳಿದ ಶ್ವೇತ ಕೇತು ಅವುಗಳನ್ನು ಕಾಯುತ್ತ- ಮೇಯಿಸುತ್ತ ಸಾಗುತ್ತಾನೆ. ನಮ್ಮನ್ನು ಯಾರು ಗಮನಿಸಲಿಲ್ಲ ಗುರುತಿಸಲಿಲ್ಲ ಎಂದರೆ ನಮ್ಮಲ್ಲಿರುವ ಹೆಮ್ಮೆ ಕಡಿಮೆಯಾಗಿ ನಮ್ಮ ಅಹಂಕಾರದ ಕಟ್ಟಡ ಕುಸಿಯುತ್ತದೆ. ಆಗ ಕಾಡಿನಲ್ಲಿ ಶ್ವೇತ ಕೇತು ತನ್ನ ಅಲೋಚನೆಗಳಿಗೆ ಅಂಕುಶ ಹಾಕಿ, ವಿಚಾರತೆಗೆ ಶೂನ್ಯತೆಯ ಸ್ಪರ್ಷ ನೀಡಿ ಸುಮ್ಮನಾಗುತ್ತಾನೆ. ಹಾಗೆ ಹಿಂಡು ಗೋವುಗಳ ಮದ್ಯ ತನ್ನನ್ನು ತಾನು ಮೖಮರೆಯುತ್ತಾನೆ.

ಹೀಗೆ ಶ್ವೇತಕೇತು ಕಾಡಿನಲ್ಲಿ ಆಕಳುಗಳೊಂದಿಗೆ ಒಂದಲ್ಲ, ಎರಡಲ್ಲ ಸತತ ಹನ್ನೆರಡು ವರ್ಷಗಳ ಕಾಲ ಕಳೆಯುತ್ತಾನೆ. ಆತ ಕಲಿತ ಅಹಂ ಬ್ರಹ್ಮಾಸ್ಮಿ ಕಾಡಿನಲ್ಲಿ ನದಿಯಾಗಿ ಹರಿದರೇ, ತತ್ವಮಸಿ ಗಾಳಿಯಲ್ಲಿ ಲೀನವಾಗಿ ಹೋಗಿರುತ್ತದೆ. ಆತ  ಹನ್ನೆರಡು ವರ್ಷಗಳಿಂದ ಸಂಪೂರ್ಣ ಶೂನ್ಯನಾಗಿರುತ್ತಾನೆ. ಒಂದು ದಿನ ಬರುತ್ತದೆ ಅಲ್ಲಿದ್ದ ಅತಿ ಮುದಿಯಾಗಿರುವ ಹಿರಿಯ ಆಕಳೊಂದು ಶ್ವೇತ ಕೇತುನನ್ನು ಎಚ್ಚರಿಸಲು ಬರುತ್ತದೆ. ಏಕೆಂದರೇ, ಅದು ಅನುಭಾವಿಯಾಗಿರುತ್ತದೆ. ಅನುಭವ ನಮ್ಮನ್ನು ಯಾವಾಗಲು ಎಚ್ಚರವಾಗಿರಲು ಸಹಾಯ ಮಾಡುತ್ತದೆ.

ಆಕಳು ಶ್ವೇತಕೇತುವಿನಲ್ಲಿ ಬಂದು ಇವತ್ತಿಗೆ ಗೋವುಗಳ ಸಂಖ್ಯ ಸಾವಿರಾಗಿದೆ..! ನೀನು ಇದನ್ನು ನಿನ್ನ ತಂದೆಗೆ ಗುರುವಿಗೂ ತೋರಿಸಬೇಕು ಹೋಗೋಣ ನಡಿ.! ಎಂದಿತು.

ನೀವು ಶೃದ್ದೆಯಿಂದ ಇದ್ದಾಗ ಪ್ರಕೃತಿಯಿಂದ ಇಂತಹ ಸ್ಮರಣೀಯ ಘಟನೆಗಳು ಜರಗುತ್ತವೆ.! ಸಾವಿರ ಗೋವುಗಳ ಹಿಂಡಿನೊಂದಿಗೆ  ಶ್ವೇತಕೇತು ಗೋದೋಳಿ ಸಮಯದಲ್ಲಿ ಗುರುಕುಲದ ಬೀದಿಯಲ್ಲಿ ಬರುತ್ತಿರುತ್ತಾನೆ. ಶಿಷ್ಯನ ಬರುವಿಕೆಯ ಸನ್ನಿವೇಶ ಕಂಡ ಗುರುಗಳು ಮೂಕವಿಸ್ಮಿತರಾಗುತ್ತಾರೆ. ಏಕೆಂದರೆ, ಅಲ್ಲಿ ಅಂದು ಬರುತ್ತಿರುವದು ಸಾವಿರ ಗೋವುಗಳಲ್ಲ.! ಅವು ಸಾವಿರದಾ ಒಂದಾಗಿರುತ್ತವೆ.! ಶ್ವೇತಕೇತು ಆಕಳೊಂದಿಗೆ ಆಕಳಾಗಿರುತ್ತಾನೆ.! ಹಾಗಾಗಿ ನಾವು ನಮ್ಮ ಬದುಕಿಲ್ಲ ಎಷ್ಟೊಂದು ವಿದ್ಯೆ ಪಡೆದಿದ್ದೇವೋ ಎಂಬುವದು ಮಹತ್ವವಲ್ಲ ನಮ್ಮ ಪ್ರತಿಭೆ, ಪದವಿಗಳು ನಮಗೆ ಯಾವ ಕಾಲಕ್ಕೂ ಅಹಂಕಾರ ತರಬಾರದು ಹಾಗಾಗಿ ವಿದ್ಯೆಗೆ ವಿನಯವೇ ಭೂಷಣ.

 ೧0ರಥ ಕೋರಿ ಶಿಕ್ಷಕರು ಇಂಡಿ 🙏🙏🌹🌹

Leave a Reply

Your email address will not be published. Required fields are marked *