ಸಂಗಾತಕ್ಕಾಗಿ
ನೀ ಏನೇ ಮಾಡು ಸಹವಾಸ,
ಸಖ್ಯ ಸಂಭವಿಸುವುದು ಮಾತ್ರ
ದೇಹಗಳ ಆಚೆ, ಆತ್ಮಗಳ ಈಚೆ.
ಪ್ರೇಮಕ್ಕಾಗಿ
ನೀ ಏನೇ ಮಾಡು ಚೌಕಾಶಿ,
ಒಲವು ಸಂಭವಿಸುವುದು ಮಾತ್ರ
ನಾನು ವಿನ ಆಚೆ, ನೀನು ವಿನ ಈಚೆ
ಸಮಾಧಾನಕ್ಕಾಗಿ
ನೀ ಏನೇ ಮಾಡು ಹುಡುಕಾಟ,
ವಿಳಾಸ ಸಂಭವಿಸುವುದು ಮಾತ್ರ
ವಿಲಾಸಗಳ ಆಚೆ, ಸಂಯಮಗಳ ಈಚೆ.
ಬಿಡುಗಡೆಗಾಗಿ
ನೀ ಏನೇ ಮಾಡು ಹೋರಾಟ,
ಬದುಕು ಸಂಭವಿಸುವುದು ಮಾತ್ರ
ಬೇಕುಗಳ ಆಚೆ, ಬೇಡಗಳ ಈಚೆ.
ಪರಮಾರ್ಥಕ್ಕಾಗಿ
ನೀ ಏನೇ ಮಾಡು ಸಾಧನೆ,
ಅನುಭಾವ ಸಂಭವಿಸುವುದು ಮಾತ್ರ
ಸ್ಥಾವರಗಳ ಆಚೆ, ಜಂಗಮಗಳ ಈಚೆ.
ಅಧ್ಯಾತ್ಮಕ್ಕಾಗಿ
ನೀ ಏನೇ ಮಾಡು ಧ್ಯಾನ,
ಪದ್ಯ ಸಂಭವಿಸುವುದು ಮಾತ್ರ
ಮಾತುಗಳ ಆಚೆ, ಮೌನಗಳ ಈಚೆ.
– ಫ್ರೆಡ್ರಿಕ್ ನೀತ್ಸೆ