ಜೀವನದ ಸಮಸ್ಯೆಗಳು ನ್ಯೂಟನ್ ಬೆಕ್ಕಿನ ಕಿಂಡಿಗಳಿದ್ದಂತೆ .!

ದಶರಥ ಕೋರಿ, ಶಿಕ್ಷಕರು, ಇಂಡಿ

ಜಗತ್ತಿಗೆ ಚಲನೆಯ ಮತ್ತು ಗುರುತ್ವಾಕರ್ಷಣೆಯ ಬಲದ ಸಿದ್ಧಾಂತವನ್ನು ಪ್ರತಿಪಾದಿಸಿದ ವಿಜ್ಞಾನಿ, ಬಂಗಾರದ ರಸವಿದ್ಯೆ ಬಲ್ಲ ಬುದ್ದಿವಂತ ಸರ್ ಐಸಾಕ್ ನ್ಯೂಟನ್ ಕುರಿತು ಒಂದು ಬಲು ಸ್ವಾರಸ್ಯಕರವಾಗಿರುವ ಘಟನೆ ಈಗಲೂ ಪ್ರಚಲಿತವಾಗಿದೆ.

ನ್ಯೂಟನ್ ರು ತಮ್ಮ ಮನೆಯಲ್ಲಿ ಪ್ರತಿನಿತ್ಯ ವಿಜ್ಞಾನದ ಚಿಂತನೆಗಳನ್ನು ಮಾಡುವಾಗ, ಅವರ ಮನೆಯ ಬೆಕ್ಕು-ಬೆಕ್ಕಿನ ಮರಿಗಳು ಬಾಗಿಲಿನಿಂದ ಅತ್ತಿಂದಿತ್ತ-ಇತ್ತಿಂದತ್ತ ತಿರುಗುತ್ತ ಅವರಿಗೆ ಪದೇ ಪದೇ ಸಮಸ್ಯೆಗಳನ್ನುಂಟು ಮಾಡುತ್ತಿದ್ದವು.
ವಿಜ್ಞಾನದ ಅನೇಕ ಜಟಿಲ ಸಮಸ್ಯೆಗಳನ್ನು ಬಗೆ ಹರಿಸಿದ ನ್ಯೂಟನ್ ರಿಗೆ ಅಂದು, ಬೆಕ್ಕಿನ ಸಮಸ್ಯೆ ನಿಜಕ್ಕೂ ಬಹು ದೊಡ್ಡದಾಗಿತ್ತು.

ಬೆಕ್ಕುಗಳು ನಿರಂತರ ಸಮಸ್ಯೆಗಳನ್ನು ಉಂಟು ಮಾಡುತ್ತಿರುವದನ್ನು ಕಂಡ ನ್ಯೂಟನ್ ರು ಅವುಗಳ ಉಪದ್ರವ ತಪ್ಪಿಸಿ ಅವು ಬಾಗಿಲಿನಿಂದ ಸರಾಗವಾಗಿ ಹೋಗಿ ಬರಲು ಒಂದು ಉಪಾಯ ಹೂಡಿದರು. ಮನೆಯ ಬಾಗಿಲಿಗೆ ಒಂದು ದೊಡ್ಡ ರಂದ್ರ ಕೊರೆದರು. ಅವರು ಅಷ್ಟಕ್ಕೆ ಸುಮ್ಮನಾಗಿದ್ದರೆ, ಚನ್ನಾಗಿತ್ತು. ಆದರೆ ಅವರ ಗಣಿತ ಎಲ್ಲೋ ತಪ್ಪಾಗಿತ್ತು, ಓದಿದ ವಿಜ್ಞಾನ ಕೈ ಕೊಟ್ಪಿತ್ತು, ಶಾಸ್ತ್ರ ಮರೆಯಾಗಿತ್ತು. ಪರಿಣಾಮ ಬೆಕ್ಕು-ಬೆಕ್ಕಿನ ಮರಿಗಳು ಸೇರಿ ಬಾಗಿಲಿನಿಂದ ಹಾಯ್ದು ಹೋಗಲು ಮಾಡ ಬೇಕಾಗಿದ್ದು ಒಂದು ದೊಡ್ಡ ರಂದ್ರ ಆ ರಂದ್ರದಿಂದಲೇ ಎಲ್ಲ ಬೆಕ್ಕುಗಳು ಹಾಯ್ದು ಹೋಗುತ್ತಿದ್ದವು.
ಆದರೆ ನ್ಯೂಟನ್ ಮಾಡಿದ ಎಡವಟ್ಟಿನಿಂದ ಬಾಗಿಲಿಗೆ ಒಂದಲ್ಲ, ಎರಡಲ್ಲ, ಮೂರು ರಂದ್ರ ಕೊರೆದರು. ಒಮ್ಮೆ ಅವರ ಆಪ್ತಮಿತ್ರ ನ್ಯೂಟನ್ ಮನೆಗೆ ಬಂದು ಮೂರು ಕಿಂಡಿಗಳನ್ನು ಕಂಡು ಗಮನಿಸಿ ನೋಡಿ ನ್ಯೂಟನ್ ರ ಕುರಿತು ಮಾತನಾಡುತ್ತ ನ್ಯೂಟನ್ ನಿನ್ನ ಮೂರು ಬೆಕ್ಕುಗಳು ಸೇರಿ ಅವುಗಳಿಗೆ ಬೇಕಾಗಿದ್ದು ಒಂದೇ ಒಂದು ದೊಡ್ಡ ರಂದ್ರ.! ಆದರೆ ನೀನು ಮಾಡಿದ್ದು ಮೂರು ರಂದ್ರ.! ಎಂದು ವಿಷಯ ತಿಳಿಸಿದಾಗ ನ್ಯೂಟನ್ ರಿಗೆ ತಮ್ಮ ತಪ್ಪಿನ ಅರಿವಾಗಿ ನಾಚಿಕೊಂಡರು.

ಈ ಕತೆಯ ವಿಷಯವನ್ನು ಮತ್ತು ನ್ಯೂಟನ್ ರನ್ನು ಇಲ್ಲಿ ಸಾಂಕೇತಿಕವಾಗಿ ಬಳಸಿಕೊಳ್ಳಲಾಗಿದೆ. ಈ ಘಟನೆಯನ್ನು ನಮ್ಮ ಜೀವನಕ್ಕೆ ಪೂರಕವಾಗಿ ಇದನ್ನು ಹೋಲಿಸಿ ನೋಡಿದಾಗ ನ್ಯೂಟನ್ ಎಂದರೆ ,
ನ್ಯೂಟನ್ = ಬುದ್ದಿ ,
ಬೆಕ್ಕು = ಮನಸ್ಸು,
ಮರಿಗಳು = ವಿಚಾರಗಳು ,
ಕಿಂಡಿಗಳು = ಸಮಸ್ಯೆಗಳು
ನಮ್ಮ ಜೀವನದ ಸಮಸ್ಯೆಗಳು ಕೂಡಾ ನ್ಯೂಟನ್ ಬೆಕ್ಕಿನ ಕಿಂಡಿಗಳೆಂಬಂತೆ ಕಂಡು ಬರುತ್ತವೆ .

ನಮ್ಮೊಳಗಿರುವ ‘ಮನಸ್ಸು’ ಠಕ್ಕುತನದ ಪ್ರತೀಕವಾಗಿರುವ ಬೆಕ್ಕಿನಂತಿದೆ. ಆದರೆ ಬೆಕ್ಕಿನ ಮರಿಗಳು ಎಂದಾದರೂ ಸುಮ್ಮನಿರುತ್ತವೆಯೇ?
ಅವು ‘ವಿಚಾರಗಳಿದ್ದಂತೆ’
ಇಲ್ಲಿ ಮನಸ್ಸು, ವಿಚಾರಗಳನ್ನು ನಿರಂತರವಾಗಿ ಉತ್ಪತ್ತಿ ಮಾಡುತ್ತಿರುತ್ತದೆ. ಆ ವಿಚಾರಗಳು ನಮ್ಮಲ್ಲಿ ಸ್ವಯಂ ಲೀನವಾಗುತ್ತಿರುತ್ತವೆ.
ಮನಸ್ಸು ನಮ್ಮ ಅಂತರಂಗದ ಕಣ್ಣಿನ ತರ ಕೆಲಸ ಮಾಡಿ ಆತ್ಮಕ್ಕೆ ಸುದ್ಧಿ ಮುಟ್ಟಿಸುತ್ತದೆ ಇಲ್ಲಿ ಆತ್ಮ ಅಮಾಯಕವಾಗಿರುತ್ತದೆ. ಆದರೆ ನಮ್ಮ ಬುದ್ದಿ ಎಲ್ಲವನ್ನೂ ನಿರ್ಣಿಯಿಸುವ ಸಾಮರ್ಥ್ಯದ ಪ್ರತೀಕವಾಗಿರುತ್ತದೆ. ಬೆಕ್ಕಿನ ಕಿಂಡಿಗಳು ಜೀವನದಲ್ಲಿ ಒಂದಾದ ಮೇಲೊಂದು ಬರುವ ಸಮಸ್ಯೆಗಳಾಗಿವೆ.

ಈ ಎಲ್ಲ ಸಮಸ್ಯೆಗಳಿಂದ ನಾವು ಪಾರಾಗಿ ಬದುಕಬೇಕಾದರೇ, ನಾವು ಸದಾ ಜಾಗೃತೆಯ ಭಾವದೊಂದಿಗೆ,
ಸ್ಥಿತಿಪ್ರಜ್ಞರಾಗಿ ನಮ್ಮ ಬುದ್ದಿಮತ್ತೆಯನ್ನು ಉಪಯೋಗಿಸಿಕೊಂಡು ಅದರ ಮೇಲೆ ಸಮಸ್ಯೆಗಳ ವಿಚಾರಗಳನ್ನು ತಂದುಕೊಳ್ಳದೇ, ಪ್ರಜ್ಞಾಪೂರ್ವಕವಾಗಿ ಬದುಕಿದರೇ, ನಮ್ಮ ಬದುಕು ಹಸನಾಗುವದು. ನ್ಯೂಟನ್ ರ ಬೆಕ್ಕಿನ ಕಿಂಡಿಗಳಂತಿರುವ ನಮ್ಮ ಜೀವನದ ಸಮಸ್ಯೆಗಳು ತಮ್ಮಿಂದ ತಾವೇ ಅರಿವಿಗೆ ಬಂದು ಮುಚ್ಚಿಕೊಳ್ಳುತ್ತವೆ.

ದಶರಥ ಕೋರಿ, ಶಿಕ್ಷಕರು, ಇಂಡಿ

Leave a Reply

Your email address will not be published. Required fields are marked *