ಪರೀಕ್ಷಾ ಒತ್ತಡ ಮತ್ತು ಭಯ ಎನ್ನುವುದು ಪರಿಕ್ಷೆಗೆ ಸರಿಯಾಗಿ ತಯಾರಿ ಮಾಡಿಕೊಳ್ಳದೆ ಇರುವುದು ಸಹಜವಾದ ಕಾರಣವಾಗಿದೆ. ಇದಲ್ಲದೆ ಇನ್ನಿತರ ಕಾರಣಗಳಾದ ಆತ್ಮವಿಶ್ವಾಸದ ಕೊರತೆ, ಮನಸ್ಸು ಕೊಟ್ಟು ಓದದೆ ಇರುವುದು ಅಥವಾ ಓದಿದ್ದು ಅರ್ಥವಾಗದೆ ಇರುವುದು, ಓದುವ ಸ್ಥಳದ ವಾತಾವರಣ ಸರಿಯಾಗಿಲ್ಲದಿರುವುದು, ಕೆಲವೊಂದು ಬಾರಿ ಮನೆಯವರ ಒತ್ತಡವು ಈ ಪರೀಕ್ಷೆಯ ಭಯಕ್ಕೆ ಕಾರಣವಾಗಿರಬಹುದು.
ಈ ಪರೀಕ್ಷಾ ಭಯವನ್ನು ನಿವಾರಣೆ ಮಾಡಬೇಕೆಂದರೆ ಮಕ್ಕಳು ಕೆಲವು ನಿಯಮಗಳನ್ನು ಪಾಲಿಸಬೇಕು. ಹಾಗಾದರೆ ಪರೀಕ್ಷೆಗಳು ಯಾವತ್ತೂ ಭಯ ಹುಟ್ಟಿಸುವುದಿಲ್ಲ, ಭಯ ಹುಟ್ಟೋದು ಮಕ್ಕಳ ಮನಸ್ಸಿನಲ್ಲಿ ಎಂದು ನಾವು ಅರ್ಥಮಾಡಿಕೊಳ್ಳಬಹುದು.
ಪರೀಕ್ಷೆ ಎಂಬುದು ಮಕ್ಕಳನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಒಂದು ವಿಧಾನ ಮಾತ್ರ. ಹಂತದಿಂದ ಹಂತಕ್ಕೆ ಅವರ ಸಾಮರ್ಥ್ಯವನ್ನು ವೃದ್ಧಿಸುವ ಹಾಗೂ ಅವರ ಜ್ಞಾನದ ಮಟ್ಟವನ್ನು ವೃದ್ಧಿಸುವ ತಂತ್ರಗಾರಿಕೆ ಎನ್ನಬಹುದು.
ಹಾಗಾಗಿ ಮಕ್ಕಳು ಭಯದಿಂದ ಮುಕ್ತರಾಗಿ ಪರೀಕ್ಷೆಗೆ ಏಕಾಗ್ರಚಿತ್ತದಿಂದ ಪರಿಕ್ಷೆಗೆ ಸಿದ್ಧತೆ ಮಾಡಿಕೊಳ್ಳಬೇಕು.
Table of Contents
ವೇಳಾಪಟ್ಟಿ ಸಿದ್ಧತೆ
ಯಾವ ಸಮಯದಲ್ಲಿ ಯಾವ ವಿಷಯ ಓದಿದರೆ ಪರಿಣಾಮಕಾರಿಯಾಗುತ್ತದೆ ಎಂಬುದನ್ನು ತಿಳಿದುಕೊಂಡು ಒಂದು ಸರಿಯಾದ ವೇಳಾಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಬೇಕು.
ಓದಿನ ಬಗ್ಗೆ ಜವಾಬ್ದಾರಿ
ಮಕ್ಕಳಲ್ಲಿ ಓದಿನ ಬಗ್ಗೆ ಜವಾಬ್ದಾರಿ ಇರಬೇಕು. ಅಂದರೆ ಮಂಗನಂತೆ ಓಡುವ ಮನಸ್ಸನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಓದಿನಲ್ಲಿ ಕೇಂದ್ರೀಕರಿಸಬೇಕು.
ಚರ್ಚೆ
ಮಕ್ಕಳು ಕೆಲವೊಂದು ಬಾರಿ ಓದಿದ್ದು ಮರೆತು ಹೋಗುತ್ತದೆ ಎನ್ನುತ್ತಾರೆ ಹಾಗಾದರೆ ಅದಕ್ಕೆ ಪರಿಹಾರವಿಲ್ಲವೇ? ಖಂಡಿತ ಇದೆ. ಮರೆವಿಗೆ ಮದ್ದೆನೆಂದರೆ ಓದಿರುವುದನ್ನು ಇತರ ಸ್ನೇಹಿತರೊಟ್ಟಿಗೆ ಚರ್ಚಿಸಿ ಪುನರ್ಮನನ ಮಾಡಿಕೊಳ್ಳಬೇಕು ಅಲ್ಲದೆ ಒಂದೆಡೆ ಮತ್ತೊಮ್ಮೆ ಬರೆದು ತೆಗೆಯಬೇಕು.
ವಿರಾಮ
ಓದಿನ ನಡುವೆ ವಿರಾಮ ತೆಗೆದುಕೊಳ್ಳಬೇಕು. ಪ್ರತಿ ವಿಷಯ ಒಂದು ತಾಸು ಓದಿದ ನಂತರ ಹತ್ತು ನಿಮಿಷವಾದರೂ ವಿಶ್ರಾಂತಿ ತೆಗೆದುಕೊಳ್ಳಬೇಕು.
ಧ್ಯಾನ
ಮನಸ್ಸಿನ ಏಕಾಗ್ರತೆ ಹಾಗೂ ಜ್ಞಾನಕ್ಕೆ ದಿವ್ಯ ಔಷಧಿ ಎಂದರೆ ಧ್ಯಾನ ಹಾಗೂ ಯೋಗಾಸನ. ಮಕ್ಕಳು ಪ್ರತಿದಿನ ಬೆಳಗಿನ ಜಾವ ಧ್ಯಾನ ಮತ್ತು ಯೋಗಾಸನಗಳನ್ನು ಮಾಡುವುದರ ಮುಖಾಂತರ ಮನಸ್ಸನ್ನು ಓದಿನಲ್ಲಿ ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುತ್ತದೆ .
ಆಟ
ಆಗಾಗ ದೇಹಕ್ಕೆ ವ್ಯಾಯಾಮ ಮನಸ್ಸಿಗೆ ಉಲ್ಲಾಸ ನೀಡುವ ಆಟಗಳನ್ನು ಆಡುತ್ತಾ ಪಾಲಕರು , ಸ್ನೇಹಿತರು ಹಾಗೂ ಶಿಕ್ಷಕರ ಜೊತೆ ಬೆರೆಯುತ್ತಾ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕು.
ಇವುಗಳ ಬಗ್ಗೆ ಹೇಳಿದ ಮಾತ್ರಕ್ಕೆ ಬರೀ ಅಂಕಪಟ್ಟಿಯೇ ನಮ್ಮ ಜೀವನವನ್ನು ನಿರ್ಧರಿಸುತ್ತದೆ ಎಂದು ಭಾವಿಸಬಾರದು. ಏಕೆಂದರೆ ಈ ಭೂಮಿಯ ಮೇಲೆ ಲಕ್ಷಾಂತರ ಜೀವಿಗಳು ಜೀವನ ನಡೆಸುತ್ತಿವೆ. ಅವುಗಳಿಗೂ ಕೆಲವೊಮ್ಮೆ ಭಗವಂತನ ಪರೀಕ್ಷೆ ಎದುರಿಸಬೇಕಾಗುತ್ತದೆ. ಆಗ ಅವು ಹೆದರಿ ಓಡಿ ಹೋಗುವುದಿಲ್ಲ ಬದಲಿಗೆ ಎದುರಿಸಿ ನಿಂತು ಪರಿಹಾರ ಕಂಡುಕೊಳ್ಳುತ್ತವೆ. ಇಂದಿನ ಆಧುನಿಕ ಜಗತ್ತಿನ ಪೀಡೆಗಳಿಗೆ ಹಾಗೂ ತಂತ್ರಜ್ಞಾನಗಳಾದ ಮೊಬೈಲ್, ದೂರದರ್ಶನ, ಅಂತರ್ಜಾಲದಂತವುಗಳಿಗೆ ತುತ್ತಾಗದೆ ಕಥೆ, ಕವನ , ಕಾದಂಬರಿ, ಸಾಮಾನ್ಯಜ್ಞಾನ, ತರಗತಿಗೆ ಸಂಬಂಧಪಟ್ಟ ಪುಸ್ತಕಗಳ ವಿಷಯಗಳನ್ನು ಓದುವ ಮೂಲಕ ಸಾಹಿತ್ಯದ ಗೀಳನ್ನು ಬೆಳೆಸಿಕೊಳ್ಳಬೇಕು. ಆಗ ಪರೀಕ್ಷಾ ಭಯ ತಾನಾಗಿಯೇ ಹೋಗಿ ಉತ್ತಮ ಅಂಕ ಗಳಿಸಲು ಸಾಧ್ಯವಾಗುತ್ತದೆ. ಇದರೊಂದಿಗೆ ಪರೀಕ್ಷೆ ಬರೆಯುವ ಮಕ್ಕಳಿಗೆ ತಂದೆ ತಾಯಿ, ಗುರುಗಳ ಪ್ರೋತ್ಸಾಹ ಅವರ ಭವಿಷ್ಯಕ್ಕೆ ಮತ್ತಷ್ಟು ಪುಷ್ಟಿ ನೀಡುತ್ತದೆ.