ಚಿಕ್ಕ ವಚನಗಳು – ಮಕ್ಕಳು ಸುಲಭವಾಗಿ ಉಚ್ಚರಿಸಬಹುದಾದ ಮತ್ತು ನೆನಪಿಟ್ಟುಕೊಳ್ಳಬಹುದಾದ ಸಣ್ಣ ಮತ್ತು ಸುಲಭವಾದ ವಚನಗಳ ಪಟ್ಟಿ ಇಲ್ಲಿದೆ.
Table of Contents
ಬಸವಣ್ಣನವರ ವಚನಗಳು
ಬಸವಣ್ಣನವರು ಜನಿಸಿದ್ದು ಕರ್ನಾಟಕ ರಾಜ್ಯದ ಈಗಿನ ವಿಜಯಪುರ ಜಿಲ್ಲೆಯಲ್ಲಿರುವ ಬಸವನ ಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದಲ್ಲಿ. ಶ್ರೀ ಮಾದರಸ ಮತ್ತು ಮಾದಲಾಂಬಿಕೆಯು ಇವರ ತಂದೆ ಮತ್ತು ತಾಯಿ. ಅವರು ತನ್ನ ತಾಯಿಯ ಚಿಕ್ಕಪ್ಪನ ಮಗಳಾದ ಶರಣೆ ನೀಲಗಣಗನನ್ನು ಮದುವೆಯಾದರು.
- ರಾಜ ಬಿಜ್ಜಳನ ಅರಮನೆಯಲ್ಲಿ ಅಕೌಂಟೆಂಟ್ ಸ್ಥಾನವನ್ನು ಪಡೆದನು.
- ಅವರು ರಾಜನ ಆಸ್ಥಾನದಲ್ಲಿ ಹಣಕಾಸು ಮಂತ್ರಿಯಾದರು ಮತ್ತು ನಂತರ ಪ್ರಧಾನಿಯಾದರು.
- ಅವರಿಗೆ ಸಂಸ್ಕೃತ ಮತ್ತು ಕನ್ನಡ ಭಾಷೆಗಳ ಸಂಪೂರ್ಣ ಜ್ಞಾನವಿತ್ತು.
- ಬಸವಣ್ಣನು ವೀರಶೈವ ಅಥವಾ ಲಿಂಗಾಯತ ಚಳವಳಿಯ ಮುಖ್ಯ ವ್ಯಕ್ತಿಯಾಗಿದ್ದು, ಇದು ಶಿವನನ್ನು ಪರಮ ದೈವವಾಗಿ ಭಾವಿಸುವುದನ್ನು ಉತ್ತೇಜಿಸಿತು.
- ಅವರು ತಮ್ಮ ವಚನಗಳಲ್ಲಿ ಆಳವಾದ ದಾರ್ಶನಿಕ ಚಿಂತನೆಗಳನ್ನು ಹಂಚಿಕೊಂಡಿದ್ದು, ತಮ್ಮ ಕಾಲದಲ್ಲಿ ಇದ್ದ ಸಾಮಾಜಿಕ ಶ್ರೇಣಿಯ ವಿಧಿ ಹಾಗೂ ಚಟುವಟಿಕೆಗಳನ್ನು ಕಠಿಣವಾಗಿ ಟೀಕಿಸಿದ್ದಾರೆ.
- ಸಾಮಾಜಿಕ ಸುಧಾರಕರಾಗಿ ಬಸವಣ್ಣ ಬ್ರಾಹ್ಮಣಿಕ ಬೋಧನೆಗಳಾದ ಹವ್ಯಾಸ ಮತ್ತು ಜಾತಿ ವ್ಯವಸ್ಥೆಯನ್ನು ತಿರಸ್ಕರಿಸುತಿದ್ದರು. ಅವರು ಶಿವನ ನೈಜ ಪೂಜೆ ಅಂದರೆ ದೇವಾಲಯದ ವಿಧಿ ಅಥವಾ ಮುರ್ತಿ ಪೂಜೆ ಅವಶ್ಯಕವಲ್ಲ, ಇದು ನಿಷ್ಠೆ ಹಾಗೂ ಭಕ್ತಿಯಿಂದಲೇ ಸಾಧ್ಯವಿರುವುದೆಂದು ಪ್ರತಿಪಾದಿಸಿದ್ದರು.
- ಅವರ ಭಕ್ತಿ, ವೈಯಕ್ತಿಕ ಆಧ್ಯಾತ್ಮ ಮತ್ತು ಸಾಮಾಜಿಕ ನ್ಯಾಯವನ್ನು ಪ್ರೋತ್ಸಾಹಿಸುವ ತತ್ವಗಳು ಇಂದು ಲಿಂಗಾಯತ ಸಮುದಾಯದ ಅನುಯಾಯಿಗಳಿಗೆ ಅತ್ಯಂತ ಪ್ರೇರಣಾದಾಯಕವಾಗಿವೆ.
ಕಳಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ,
ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ,
ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ.
ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ,
ಇದೇ ನಮ್ಮ ಕೂಡಲಸಂಗಮ ದೇವರನೊಲಿಸುವ ಪರಿ.
ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲಾ-
ನಿಮ್ಮ ಪಾದ ಸಾಕ್ಷಿ, ಎನ್ನ ಮನ ಸಾಕ್ಷಿ!
ಕೂಡಲಸಂಗಮದೇವಾ, ಎನಗಿದೇ ದಿಬ್ಯ.
ಇವನಾರವ, ಇವನಾರವ, ಇವನಾರವ? ನೆಂದೆನಿಸದಿರಯ್ಯಾ.
“ಇವ ನಮ್ಮವ, ಇವ ನಮ್ಮವ, ಇವ ನಮ್ಮವ” ನೆಂದೆನಿಸಯ್ಯಾ.
ಕೂಡಲಸಂಗಮದೇವಾ, ನಿಮ್ಮ ಮನೆಯ ಮಗನೆನಿಸಯ್ಯಾ.
ಲೋಕದ ಡೊಂಕ ನೀವೇಕೆ ತಿದ್ದುವಿರಿ?
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ;
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ.
ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ
ಕೂಡಲಸಂಗಮದೇವ.
ಉಳ್ಳವರು ಶಿವಾಲಯವ ಮಾಡುವರು:
ನಾನೇನ ಮಾಡುವೆ? ಬಡವನಯ್ಯಾ.
ಎನ್ನ ಕಾಲೇ ಕಂಬ, ದೇಹವೇ ದೇಗುಲ,
ಶಿರ ಹೊನ್ನ ಕಳಸವಯ್ಯಾ.
ಕೂಡಲಸಂಗಮದೇವ, ಕೇಳಯ್ಯಾ:
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲಾ!
ನುಡಿದರೆ ಮುತ್ತಿನ ಹಾರದಂತಿರಬೇಕು.
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು.
ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು.
ನುಡಿದರೆ ಲಿಂಗ ಮೆಚ್ಚಿ ʼಅಹುದಹುದೆʼನಬೇಕು.
ನುಡಿಯೊಳಗಾಗಿ ನಡೆಯದಿದ್ದರೆ,
ಕೂಡಲಸಂಗಮದೇವನೆಂತೊಲಿವನಯ್ಯಾ?
ಅಂದು ಇಂದು ಮತ್ತೊಂದೆನಬೇಡ
ದಿನವಿಂದೆ ಶಿವ ಶರಣೆಂಬವಂಗೆ
ದಿನವಿಂದೆ ಹೊರ ಶರಣೆಂಬವಂಗೆ
ದಿನವಾಗಿದೆ ನಮ್ಮ ಕೂಡಲಸಂಗನ ಮಾತಿದೆ ನೆನೆವಂಗೆ.
ದಯವಿಲ್ಲದ ಧರ್ಮವಾವುದಯ್ಯಾ ?
ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ
ದಯವೇ ಧರ್ಮದ ಮೂಲವಯ್ಯಾ
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ
ಭಕ್ತಿಯಿಲ್ಲದ ಬಡವ ನಾನಯ್ಯ:
ಕಕ್ಕಯ್ಯನ ಮನೆಯಲು ಬೇಡಿದೆ;
ಚೆನ್ನಯ್ಯನ ಮನೆಯಲು ಬೇಡಿದೆ;
ದಾಸಯ್ಯನ ಮನೆಯಲೂ ಬೇಡಿದೆ.
ಎಲ್ಲಾ ಪುರಾತರು ನೆರೆದು ಭಕ್ತಿಭಿಕ್ಷವನಿಕ್ಕಿದರೆ
ಎನ್ನ ಪಾತ್ರೆ ತುಂಬಿತ್ತು, ಕೂಡಲಸಂಗಮದೇವಾ.
ದೇವಲೋಕ ಮರ್ತ್ಯಲೋಕವೆಂಬುದು ಬೇರಿಲ್ಲಾ ಕಾಣಿರೋ !
ಸತ್ಯವ ನುಡಿವಿದೇ ದೇವಲೋಕ, ಮಿಥ್ಯವ ನುಡಿವುದೇ ಮರ್ತ್ಯಲೋಕ.
ಆಚಾರವೇ ಸ್ವರ್ಗ, ಅನಾಚಾರವೇ ನರಕ.
ಕೂಡಲಸಂಗಮದೇವಾ, ನೀವೆ ಪ್ರಮಾಣ.
ಸಂಸಾರವೆಂಬಡವಿಯಲ್ಲಿ ಹುಲಿಯುಂಟು ಕರಡಿಯುಂಟು
ಶರಣನಂಜನಂಜ ಮಹಾಧೀರ ಶರಣನಂಜನಂಜ
ಕೂಡಲ ಸಂಗನ ಶರಣಂಗೆ ನಿರ್ಭಯ
ಒಲ್ಲೆನಯ್ಯಾ, ಒಲ್ಲೆನಯ್ಯಾ, ನಿಮ್ಮವರಲ್ಲದವರ,
ಒಲ್ಲೆನಯ್ಯಾ, ಒಲ್ಲೆನಯ್ಯಾ, ಜಗವೆಲ್ಲವರಿಯಲಿಕೆ,
ಒಲ್ಲೆನಯ್ಯಾ, ಒಲ್ಲೆನಯ್ಯಾ, ನೀ ಮುನಿದರೆ ಮುನಿ,
ಕೂಡಲಸಂಗಮದೇವಾ, ನಿಮ್ಮಾಣೆ, ನಿಮ್ಮ ಪ್ರಮಥರಾಣೆ!
ಅಕ್ಕ ಮಹಾದೇವಿ ಯವರ ವಚನಗಳು
ಅಕ್ಕ ಮಹಾದೇವಿ ಅವರು 12ನೇ ಶತಮಾನದಲ್ಲಿ ಕಂಡುಬರುವ ಪ್ರಮುಖ ಶರಣೆ ಆಗಿದ್ದಾರೆ.
ಇವರು ಸರಿ ಸುಮಾರು 430 ಸುಂದರವಾದ ಮತ್ತು ಅರ್ಥಗರ್ಭಿತವಾದ ವಚನಗಳನ್ನು ರಚಿಸಿದ್ದು, “ಅನುಭವ ಮಂಟಪ” ದಲ್ಲಿ ನಡೆಯುವ ಅನೇಕ ಅದ್ಯಾತ್ಮಕ ಚರ್ಚೆಗಳಿಗೆ ತಮ್ಮ ಕೊಡುಗೆಯನ್ನು ನೀಡಿದ್ದಾರೆ.
ಇವರು ನಮ್ಮ ಇಡೀ ಮಹಿಳಾ ಸಮುದಾಯ ಮತ್ತು ಕರ್ನಾಟಕಕ್ಕೆ ಹೆಮ್ಮೆಯ ಸ್ಪೂರ್ತಿದಾಯಕ ಮಹಿಳೆ ಆಗಿದ್ದಾರೆ.
ಅಕ್ಕಮಹಾದೇವಿಯವರು ಜನಿಸಿದ್ದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ-ಶಿರಾಳ ಕೊಪ್ಪದ ನಡುವೆ ಇರುವ ಉಡುತಡಿ ಅಥವಾ ಉಡಗಣಿ ಇಲ್ಲವೆ ಉಡುಗಣಿ ಎಂದೇ ಪ್ರಸಿದ್ದವಾಗಿರುವ ಪುಟ್ಟ ಗ್ರಾಮದಲ್ಲಿ.
ಇವರು ಕೊನೆಯಲ್ಲಿ ತಮ್ಮ ಇಷ್ಟದೈವರಾದ ಮಲ್ಲಿಕಾರ್ಜುನನಲ್ಲಿ ಶ್ರಿಶೈಲದ ಕದಳಿವನದಲ್ಲಿ ಐಕ್ಯರಾದರು.
ಎಲ್ಲರ ಪ್ರಾಣವಂಗೈಯಲಿದೆ
ಎನ್ನ ಪ್ರಾಣ ಜಂಗಮದಲದೆ.
ಎಲ್ಲರ ಆಯುಷ್ಯ ಶಿರದಲ್ಲಿ ಬರೆದಿದೆ
ಎನ್ನ ಆಯುಷ್ಯ ನಿಮ್ಮಲ್ಲಿ ಸಂದಿದೆ.
ಚೆನ್ನಮಲ್ಲಿಕಾರ್ಜುನಾ,
ನಿಮ್ಮ ಶರಣರೆನ್ನ ಪ್ರಾಣಲಿಂಗವೆಂದು ಧರಿಸಿದೆನು.
ಒಬ್ಬಂಗೆ ಇಹವುಂಟು ಒಬ್ಬಂಗೆ ಪರವುಂಟು,
ಒಬ್ಬಂಗೆ ಇಹವಿಲ್ಲ ಒಬ್ಬಂಗೆ ಪರವಿಲ್ಲ.
ಒಬ್ಬಂಗೆ ಇಹಪರವೆರಡೂ ಇಲ್ಲ.
ಚೆನ್ನಮಲ್ಲಿಕಾರ್ಜುನದೇವರ ಶರಣರಿಗೆ
ಇಹಪರವೆರಡೂ ಉಂಟು.
ಒಬ್ಬನ ಮನೆಯಲುಂಡು,
ಒಬ್ಬನ ಮನೆಯಲುಟ್ಟು,
ಒಬ್ಬನ ಬಾಗಿಲ ಕಾದಡೆ ನಮಗೇನಯ್ಯಾ?
ನೀನಾರಿಗೊಲಿದಡೂ ನಮಗೇನಯ್ಯಾ?
ಚೆನ್ನಮಲ್ಲಿಕಾರ್ಜುನಯ್ಯಾ,
ಭಕ್ತಿಯ ಬೇಡಿ ಬಾಯಿ ಬೂತಾಯಿತ್ತು.
ಕೇಳವ್ವಾ ಕೇಳವ್ವಾ ಕೆಳದಿ ನಾನೊಂದು ಕನಸಕಂಡೆ.
ಗಿರಿಯಮೇಲೊಬ್ಬ ಗೊರವ ಕುಳ್ಳಿರ್ದುದ ಕಂಡೆ.
ಗಿರಿಯೆಂಬುದು ಸಿರಿಶೈಲ
ಗೊರವನೆ ಚೆನ್ನಮಲ್ಲಿಕಾರ್ಜುನನು.
ತುಂಬಿದುದು ತುಳುಕದು ನೋಡಾ.
ನಂಬಿದುದು ಸಂದೇಹಿಸದು ನೋಡಾ.
ಒಲಿದುದು ಓಸರಿಸದು ನೋಡಾ.
ನೆರೆದುದು ಮರೆಯದು ನೋಡಾ.
ಚೆನ್ನಮಲ್ಲಿಕಾರ್ಜುನಯ್ಯಾ,
ನೀನೊಲಿದ ಶರಣಂಗೆ ನಿಸ್ಸೀಮಸುಖವಯ್ಯಾ.
ಕಿಚ್ಚಲ್ಲದ ಬೇಗೆಯಲ್ಲಿ ಬೆಂದೆನವ್ವಾ
ಏರಿಲ್ಲದ ಗಾಯದಲ್ಲಿ ನೊಂದೆನವ್ವಾ
ಸುಖವಿಲ್ಲದೆ ಧಾವತಿಗೊಂಡೆನವ್ವಾ
ಚೆನ್ನಮಲ್ಲಿಕಾರ್ಜುನದೇವಂಗೊಲಿದು
ಬಾರದ ಭವಂಗಳಲ್ಲಿ ಬಂದೆನವ್ವಾ
ವನವೆಲ್ಲಾ ನೀನೆ ವನದೊಳಗಣ ದೇವತರುವೆಲ್ಲಾ ನೀನೆ
ತರುವಿನೊಳಗಾಡುವ ಖಗಮೃಗವೆಲ್ಲಾ ನೀನೆ
ಚೆನ್ನಮಲ್ಲಿಕಾರ್ಜುನಾ
ಸರ್ವಭರಿತನಾಗಿ ಏನಗೇಕೆ ಮುಖದೋರೆ?
ಎನ್ನಂತೆ ಪುಣ್ಯಗೈದವರುಂಟೆ.
ಎನ್ನಂತೆ ಭಾಗ್ಯಂಗೈದವರುಂಟೆ.
ಕಿನ್ನರನಂತಪ್ಪ ಸೋದರರೆನಗೆ,
ಏಳೇಳು ಜನ್ಮದಲ್ಲಿ ಶಿವಭಕ್ತರೆ ಬಂಧುಗಳೆನಗೆ.
ಚೆನ್ನಮಲ್ಲಿಕಾರ್ಜುನನಂತಪ್ಪ ಗಂಡ ನೋಡಾ ಎನಗೆ.
ಉಟ್ಟುದ ತೊರೆದ ಮತ್ತೆ
ಕಟ್ಟಿದ ಲಿಂಗವ ಕೈಯಲ್ಲಿ ಹಿಡಿಯಲೇಬೇಕು.
ಉಟ್ಟುದ ತೊರೆಯದೆ
ಕಟ್ಟಿದ ಲಿಂಗವ ಕೈಯಲ್ಲಿ ಹಿಡಿವ
ಭ್ರಷ್ಟರನೇನೆಂಬೆ ಚನ್ನಮಲ್ಲಿಕಾರ್ಜುನಾ?
ಆವ ವಿದ್ಯೆಯ ಕಲಿತಡೇನು?
ಸಾವ ವಿದ್ಯೆ ಬೆನ್ನಬಿಡದು.
ಅಶನವ ತೊರೆದಡೇನು, ವ್ಯಸನವ ಮರೆದಡೇನು?
ಉಸುರ ಹಿಡಿದಡೇನು, ಬಸುರ ಕಟ್ಟಿದಡೇನು?
ಚೆನ್ನಮಲ್ಲಿಕಾರ್ಜುನದೇವಯ್ಯಾ,
ನೆಲ ತಳವಾರನಾದಡೆ ಕಳ್ಳನೆಲ್ಲಿಗೆ ಹೋಹನು?
ಅರಿದೆನೆಂದಡೆ ಅರಿಯಬಾರದು ನೋಡಾ.
ಘನಕ್ಕೆ ಘನ ತಾನೆ ನೋಡಾ.
ಚೆನ್ನಮಲ್ಲಿಕಾರ್ಜುನನ ನಿರ್ಣಯವಿಲ್ಲದೆ ಸೋತೆನು.
ಎಲೆ ತಾಯಿ ನೀನಂತಿರು,
ಎಲೆ ತಂದೆ ನೀನಂತಿರು,
ಎಲೆ ಬಂಧುವೆ ನೀನಂತಿರು,
ಎಲೆ ಕುಲವೆ ನೀನಂತಿರು,
ಎಲೆ ಬಲವೆ ನೀನಂತಿರು.
ಚೆನ್ನಮಲ್ಲಿಕಾರ್ಜುನನ ಕೂಡುವ ಭರದಿಂದ
ಹೋಗುತ್ತಿದ್ದೇನೆ.
ನಿಮಗೆ ಶರಣಾರ್ಥಿ ಶರಣಾರ್ಥಿ.
ಕಿಚ್ಚಿಲ್ಲದ ಬೇಗೆಯಲ್ಲಿ ಬೆಂದೆನವ್ವಾ.
ಏರಿಲ್ಲದ ಗಾಯದಲ್ಲಿ ನೊಂದೆನವ್ವಾ.
ಸುಖವಿಲ್ಲದೆ ಧಾವತಿಗೊಂಡೆನವ್ವಾ.
ಚೆನ್ನಮಲ್ಲಿಕಾರ್ಜುನದೇವಂಗೊಲಿದು
ಬಾರದ ಭವಂಗಳಲ್ಲಿ ಬಂದೆನವ್ವಾ.
ಕೆಂಡದ ಶವದಂತೆ, ಸೂತ್ರ ತಪ್ಪಿದ ಬೊಂಬೆಯಂತೆ,
ಜಲವರತ ತಟಾಕದಂತೆ, ಬೆಂದ ನುಲಿಯಂತೆ
ಮತ್ತೆ ಹಿಂದಣಂಗವುಂಟೆ ಅಣ್ಣಾ,
ಚೆನ್ನಮಲ್ಲಿಕಾರ್ಜುನನಂಗವೆ ಆಶ್ರಯವಾದವಳಿಗೆ?