ಪರೀಕ್ಷೆ ಎಂದೊಡನೆ ಮನವೇಕೋ
ಪಂಜರದೊಳಗಿನ ಪಾರಿವಾಳವಾಯಿತು.
ದುಗುಡ ದಿಗಿಲುಗಳ ಆರ್ಭಟ
ಎದೆಯಾಳದಲ್ಲಿ ಸುನಾಮಿಯ ಸೃಷ್ಟಿಸಿತು|
ಪರೀಕ್ಷೆ ಎಂದೊಡನೆ ಮಗುವಿನಂತಿದ್ದ ಮೆದುಳು
ನೆರೆತ ನಾಯಕನಂತಾಯಿತು
ಸಂಕೋಚ ನಾಚಿಕೆ ಭಯದ ಕಾರ್ಗತ್ತಲು
ದಟ್ಟ ಕಾನನವ ಆವರಿಸಿದಂತಾಯಿತು ||
ಪರೀಕ್ಷೆ ಎಂದೊಡನೆ ಮೈಯೆಲ್ಲ
ರೋಮಾಂಚನವಾಗಿ ಕಂಪನ ಉಂಟಾಯಿತು.
ಆ ಕಂಪನದ ಕಾಳ್ಗಿಚ್ಚು ದೇಹವನ್ನೆಲ್ಲಾ ಹಬ್ಬಿ
ಕಾಯ ಕಾದು ರೋಗದ ಗೂಡಾಯಿತು|||
ಪರೀಕ್ಷೆ ಎಂದೊಡನೆ ಕೆಲವರಿಗೆ ಉತ್ಸಾಹ,
ಕೆಲವರಿಗೆ ಸಂಭ್ರಮ, ಕೆಲವರಿಗೆ ಸಂಕಟದ ಬೇನೆ.
ಅಕ್ಷರ ಜ್ಞಾನದ ಅಳತೆಗೋಲಿದು
ಜೀವನದಂತ್ಯವಲ್ಲವೆನ್ನುವುದ ಅರಿಯಿರಿ||||
ಪರೀಕ್ಷೆಗಳು ಬರಬೇಕು. ನಿರೀಕ್ಷೆಗಳು ಇರಬೇಕು
ಭವಿಷ್ಯತ್ತಿನ ಸಮೀಕ್ಷೆಗಳು ನಡೆಯಬೇಕು.
ಪರೀಕ್ಷಾ ಉಪೇಕ್ಷೆಗಳು ಇಲ್ಲವಾಗಿ
ವಿದ್ಯಾರ್ಥಿಗಳು ಜ್ಞಾನ ಪಡೆದು ಸುಶಿಕ್ಷಿಗಳಾಗಬೇಕು|||||
ನವಯುಗದ ನವನಾಂದಿಗೆ ನವಚೇತನದ
ನವಯುವಕರ ನವಶಕ್ತಿಯ ನವನಿರ್ಧಾರಗಳು
ನವನವೀನ ನಾಡಿನ ನವಭರವಸೆಗಳಾಗಬೇಕು.
ನವ ಬಾಳಿನ ನವ ಹೆಜ್ಜೆಗೆ ನವೀನ ಪರೀಕ್ಷೆಗಳು ಎದುರಾಗಬೇಕು
ನವೋಲ್ಲಾಸದಿ ಜಗವೆಲ್ಲ ನವೀನ ಜ್ಞಾನದ ಚಿಲುಮೆಯಾಗಿ
ನಗುಮುಖದ ಜನರೆಲ್ಲ ನವನಾಡಿನ ಬೆಳಕಾಗಬೇಕು||||||
ಪರೀಕ್ಷಾ ಯಶಸ್ಸಿನ ಬಯಕೆಯಲ್ಲಿರುವವರ
ಆಕಾಂಕ್ಷೆಗಳು ಆಕಾಶದೆತ್ತರಕ್ಕಿರಬೇಕು.
ನೀತಿಗಳು ನಿಯತಿಯನ್ನು ಮೀರುವಂತಿರಬೇಕು
ಕನಸುಗಳು ಕಾರ್ಮೋಡವನ್ನು ಸೀಳಿ ನುಗ್ಗುವ ಸೂರ್ಯನ ಕಿರಣಗಳಂತಿರಬೇಕು
ಭರವಸೆಗಳು
ಕಲಿಕೆಯ ಕಾಲುವೆ ಸಾಗರವಾಗುವಂತಿರಬೇಕು
ರಚನೆ : ನಾಗರಾಜ ವಾಲಿಕಾರ