Holi Celebration 2024 : Date, Significance and History
ಹೋಳಿಯು ದೇಶದಾದ್ಯಂತ ಅತಿ ಉತ್ಸಾಹದಿಂದ ಆಚರಿಸುವ ಜನಪ್ರಿಯ ಹಬ್ಬ. ಗಂಡು ಮಕ್ಕಳಂತೂ ವರ್ಷವಿಡೀ ಕಾಯುತ್ತ ಕುಳಿತಿರುತ್ತಾರೆ. ಇದನ್ನು ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ ‘ಬಣ್ಣಗಳ ಹಬ್ಬ’, ‘ಡೋಲ್ ಜಾತ್ರೆ’,’ಬಸಂತ ಉತ್ಸವ’ ಎಂದು. ಸಹಜವಾಗಿ ಫೆಬ್ರವರಿ ಕೊನೆಯಲ್ಲಿ ಅಥವಾ ಮಾರ್ಚ್ ಆರಂಭದಲ್ಲಿ ಆಚರಿಸುತ್ತಾರೆ. ಹೋಳಿಯು ವಸಂತಕಾಲದ ಆಗಮನ ಮತ್ತು ಚಳಿಗಾಲದ ಅಂತ್ಯವನ್ನು ಸೂಚಿಸುತ್ತದೆ. ಇದು ಹಿಂದೂ ತಿಂಗಳ ಫಾಲ್ಗುಣದ ಸಂಜೆ ಹುಣ್ಣಿಮೆಯ ಸಂಜೆ ಪ್ರಾರಂಭವಾಗಿ ಒಂದು ರಾತ್ರಿ ಮತ್ತು ಒಂದು ದಿನದವರೆಗೆ ಇರುತ್ತದೆ.
Table of Contents
2024 ರಲ್ಲಿ ಹೋಳಿ ಯಾವಾಗ? ದಿನಾಂಕ ಮತ್ತು ಸಮಯ
ಹುಣ್ಣಿಮೆ ತಿಥಿ ಪ್ರಾರಂಭ – ಮಾರ್ಚ್ 24, 2024 ರಂದು 09:54 AM
ಹುಣ್ಣಿಮೆ ತಿಥಿ ಕೊನೆಗೊಳ್ಳುವುದು – ಮಾರ್ಚ್ 25, 2024 ರಂದು ಮಧ್ಯಾಹ್ನ 12:29
ಹೋಳಿ ಯ ಇತಿಹಾಸ:
ಪುರಾಣಗಳ ಪ್ರಕಾರ ಹೋಳಿ ಹಬ್ಬವನ್ನು ಮೂರು ಕಾರಣಗಳಿಗಾಗಿ ಆಚರಿಸುತ್ತಾರೆ
- ರಾಧೆ ಮತ್ತು ಕೃಷ್ಣ ರ ಪ್ರೀತಿಗಾಗಿ
- ನರಸಿಂಹರೂಪಿಯಾದ ವಿಷ್ಣು ಮತ್ತು ಪ್ರಹ್ಲಾದನ ಭಕ್ತಿಗಾಗಿ
- ಕಾಮ ದೇವರು ಮರುಳಿದ ದಿನವಾಗಿ
ರಾಧೆ ಮತ್ತು ಕೃಷ್ಣ ರ ಪ್ರೀತಿಗಾಗಿ
ಗರ್ಗ ಋಷಿಯವರ ಪುರಾಣ ಕೃತಿಯಾದ ಗರ್ಗ ಸಂಹಿತೆಯ ಪ್ರಕಾರ, ಹೋಳಿ ಹಬ್ಬವು ಪ್ರೀತಿಯ ಸಾಂಕೇತಿಕ ದಂತಕಥೆಯಾಗಿದೆ. ಕಪ್ಪಗಿರುವ ಕೃಷನು, ರಾಧೆಯು ತನಗೆ ಇಷ್ಟ ಪಡುತ್ತಾಳೋ ಇಲ್ಲವೋ ಎಂದು ಚಿಂತಿಸುತ್ತಿರಲು ಯಶೋಧೆಯ ಮಾತಿನ ಪ್ರಕಾರ ರಾಧೆಯು ತನಗಿಷ್ಟವಾದ ಬಣ್ಣವನ್ನು ಕಪ್ಪಗೆ ಇರುವ ಕೃಷ್ಣನಿಗೆ ಹಚ್ಚಿ ತನ್ನ ಇಷ್ಟವನ್ನು ವ್ಯೆಕ್ತಪಡಿಸುತ್ತಾಳೆ, ಮತ್ತು ಇದರಿಂದ ರಾಧಾ ಮತ್ತು ಕೃಷ್ಣ ಇಬ್ಬರು ದಂಪತಿಗಳಾಗುತ್ತಾರೆ. ಈ ಪ್ರೀತಿಯ ದಿನವನ್ನು ಸ್ಮರಿಸಲು ಹೋಳಿ ಹಬ್ಬವನ್ನು ಆಚರಿಸುತ್ತಾರೆ.
ನರಸಿಂಹರೂಪಿಯಾದ ವಿಷ್ಣು ಮತ್ತು ಪ್ರಹ್ಲಾದನ ಭಕ್ತಿಗಾಗಿ
ಇನ್ನೊಂದು ಕಥೆಯ ಪ್ರಕಾರ, ಇದು ಹಿರಣ್ಯಕಶ್ಯಪನ ಸಹೋದರಿ “ಹೋಲಿಕಾ” ದಹನವಾದ ದಿನವಾಗಿದೆ. ಭಗವಾನ್ ವಿಷ್ಣುವು ತನ್ನ ನಿಷ್ಠಾವಂತ ಶಿಷ್ಯ ಪ್ರಹ್ಲಾದನನ್ನು ತನ್ನ ತಂದೆ ಹಿರಣ್ಯಕಶ್ಯಪ ನಿಂದ ರಕ್ಷಿಸಿದನು ಎಂದು ಹೇಳಲಾಗುತ್ತದೆ. ಹಿರಣ್ಯಕಶ್ಯಪನ ಸಹೋದರಿ ಹೋಲಿಕಾ ಅಗ್ನಿ ಯಲ್ಲಿ ದಹನವಾಗದ ಹಾಗೆ ವರವನ್ನು ಪಡೆದಿದ್ದಳು. ಈ ಶಕ್ತಿಯ ಮೇಲಿನ ನಂಬಿಕೆಯಿಂದ ಮತ್ತು ಅಣ್ಣನಾದ ಹಿರಣ್ಯಕಶ್ಯಪನ ಮಾತಿನಂತೆ, ಬಾಲಕ ಪ್ರಹ್ಲಾದನನ್ನು ತನ್ನ ಮಡಿಲಲ್ಲಿ ಕೂರಿಸಿಕೊಂಡು ಕೆರಳಿದ ಬೆಂಕಿಯಲ್ಲಿ ಕೂರುತ್ತಾಳೆ.
ಶ್ರೀ ವಿಷ್ಣುವಿನ ಆಶೀರ್ವಾದದಿಂದ ಬಾಲಕ ಪ್ರಹ್ಲಾದನಿಗೆ ಒಂದು ಚೂರೂ ಗಾಯವಾಗಲಿಲ್ಲ, ಬದಲಿಗೆ ಹೋಲಿಕಾಳು ಸುಟ್ಟು ಭಸ್ಮವಾದಳು. ಆದ್ದರಿಂದ ನಮ್ಮೆಲ್ಲರ ಕೆಟ್ಟ ಆಲೋಚನೆಗಳು ಬೆಂಕಿಯಲ್ಲಿ ಭಸ್ಮವಾಗಲಿ ಎಂದು ಮೊದಲನೇಯ ದಿನ ಹೋಲಿಕಾ ದಹನವನ್ನು ಮಾಡುವುದು ಪದ್ಧತಿ.
ಕಾಮ ದೇವರು ಮರುಳಿದ ದಿನವಾಗಿ
ಇನ್ನು ಕೆಲವು ಸಂಪ್ರದಾಯಗಳಲ್ಲಿ ಹೋಳಿ ಆಳವಾದ ಧ್ಯಾನದಲ್ಲಿದ್ದ ಶಿವನಿಗೆ ಸಂಬಂಧಿಸಿದೆ. ಶಿವನು ಆಳವಾದ ಧ್ಯಾನದಲ್ಲಿ ಮುಳುಗಿರುತ್ತಾನೆ, ಆಗ ಪಾರ್ವತಿ ದೇವಿಯು ಶಿವನನ್ನು ಮರಳಿ ಜಗತ್ತಿಗೆ ತರಲು ಬಯಸಿ, ವಸಂತ ಪಂಚಮಿಯಂದು ಪ್ರೀತಿಯ ಸಂಕೇತವಾದ ಕಾಮದೇವನ ಬಳಿ ಸಹಾಯ ಕೇಳುತ್ತಾಳೆ. ಆಗ ಕಾಮ ದೇವರು ಶಿವನ ಮೇಲೆ ಬಾಣಗಳನ್ನು ಬಿಡುತ್ತಾನೆ, ಇದರಿಂದ ಕೋಪಗೊಂಡ ಶಿವನು ತನ್ನ ಮೂರನೆಯ ಕಣ್ಣನ್ನು ತೆರೆದು ಕಾಮದೇವರನ್ನು ಸುಟ್ಟು ಬೂದಿ ಮಾಡುತ್ತಾನೆ.
ಇದರಿಂದ ಅಸಾಮಾಧಾನಗೊಂಡ ರತಿ ದೇವಿಯು ತನ್ನ ಗಂಡನಾದ ಕಾಮದೇವರನ್ನು ಮರಳಿ ಪಡೆಯಲು 40 ದಿನಗಳ ಕಾಲ ಧೀರ್ಗ ಧ್ಯಾನ ಮತ್ತು ತಪಸ್ಸನ್ನು ಮಾಡುತ್ತಾಳೆ. ರತಿ ದೇವಿಯ ತಪಸ್ಸಿನ ಫಲವಾಗಿ ಶಿವನು ಕಾಮದೇವನನ್ನು ಮರು ಸೃಷ್ಟಿಮಾಡುತ್ತಾನೆ. ಪ್ರೀತಿಯ ದೇವರಾದ ಕಾಮದೇವನ ಪುನರಾಗಮನವನ್ನು ವಸಂತ ಪಂಚಮಿ ಹಬ್ಬದ ನಂತರ 40 ನೇ ದಿನದಂದು ಹೋಳಿ ಎಂದು ಆಚರಿಸಲಾಗುತ್ತದೆ.
ಭಾರತೀಯ ವಿವಿಧ ಹಿಂದೂ ಸಂಪ್ರದಾಯಗಳಲ್ಲಿ ಹೋಳಿ ಹಬ್ಬವು ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ. ನಮ್ಮ ಹಳೆಯ ದೋಷ ಮತ್ತು ದ್ವೇಷಗಳನ್ನು, ಕೊನೆಗೊಳಿಸಿ ಇತರರನ್ನು ಭೇಟಿ ಮಾಡಿ ಸ್ನೇಹವನ್ನು ಬಲಪಡಿಸಿಕೊಳ್ಳುವ ದಿನವಾಗಿದೆ. ಹೋಳಿಯು ವಸಂತಕಾಲದ ಆರಂಭವಾಗಿರುವುದರಿಂದ, ಜನರು ಬದಲಾಗುತ್ತಿರುವ ಋತುಗಳನ್ನು ಆನಂದಿಸಲು ಮತ್ತು ಹೊಸ ಸ್ನೇಹಿತರನ್ನು ಮಾಡಿಕೊಳ್ಳುವ ಸಂದರ್ಭವಾಗಿದೆ.