ಸ್ತ್ರೀ ಕವನಗಳು : ಮೀಸೆ ಹುಡುಗಿ

ಮೀಸೆ_ಹುಡುಗಿ


ನೀನು ಚೆಲುವೆ
ಎಂದು ಅವನು ಹೇಳಿದಾಗ
ನಾನು ನಂಬುವುದಿಲ್ಲ.
ಬದಲಾಗಿ, ನನ್ನ ಸ್ಕೂಲ್ ದಿನಗಳನ್ನು
ಮತ್ತೊಮ್ಮೆ ಜೀವಿಸುತ್ತೇನೆ.
ನಾನು ಎಷ್ಟು ಚೆನ್ನಾಗಿದ್ದೇನೊ ಗೊತ್ತಿಲ್ಲ
ಆದರೆ ಎಲ್ಲರಿಗೂ ನಾನು
ಮೀಸೆ ಹುಡುಗಿ.
ಅವನಿಗೆ ಗೊತ್ತಿರಲಿಕ್ಕಿಲ್ಲ
ಅಮ್ಮನ ತವರಿನಲ್ಲಿ
ಹೆಣ್ಣು ಮಗಳು ಬೆಳೆಯುವ ಸಂಕಟ.
ಅಲ್ಲಿ ಅಪ್ಪನ X ಒಂದೇ
ನನ್ನ ದೇಹದ ಹೆಮ್ಮೆ,
ಅಮ್ಮನ X ಗೆ ತಾನು ಪೂರ್ಣ ಹೆಣ್ಣಲ್ಲದ
ಬಗ್ಗೆ ಒಳಗೊಳಗೇ ಮರುಕ.
ಜನ ನನ್ನ ಮೆಚ್ಚುವುದು
ನನ್ನ ನನ್ನತನಕ್ಕಾಗಿ ಮಾತ್ರ ಎಂಬ
ಖಾಲಿ ಸಾಂತ್ವನವನ್ನು
ತನ್ನ ಮೂಲೆ ಮೂಲೆಗಳಲ್ಲಿ ತುಂಬಿಕೊಂಡಿದ್ದಾಳೆ
ಈ ಹರೆಯದ ಹುಡುಗಿ ಎಂಬುದು
ಅವನಿಗೆ ಗೊತ್ತಿಲ್ಲ.
ನೀನು ‘ನಿನ್ನ ಹಾಗಿರು’
ಎಂದು ಹೇಳುತ್ತಲೇ
Fair & Lovely ಶೇಡ್ ಕಾರ್ಡನ್ನು
ನನ್ನ ಮೂತಿಯ ಮುಂದೆ ಹಿಡಿಯುವ
ಈ ಜಗತ್ತಿನ ಬಗ್ಗೆ
ಅವನಿಗೆ ಗೊತ್ತಿಲ್ಲ.
ನನ್ನ ಮುಗ್ಧ ಚರ್ಮವನ್ನು
ತನ್ನ ಬ್ರ್ಯಾಂಡಿನ ಹೆಣ್ತನದಿಂದ ಸುಲಿಯುವ
Hot wax ಮತ್ತ್ತು ಲೇಸರ್ ಬಗ್ಗೆ ಕೂಡ
ಅವನಿಗೆ ಗೊತ್ತಿಲ್ಲ.
ಹೈಜಿನ್ ಹೆಸರಲ್ಲಿ
ನನ್ನ ಗಟ್ಟಿಮುಟ್ಟಾದ ಕೂದಲನ್ನು
ಬೇರು ಸಹಿತ ಕೀಳುವ
Veet ಮತ್ತು Bleach ಗಳ ಬಗ್ಗೆಯೂ
ಅವನಿಗೆ ಗೊತ್ತಿದ್ದಂತಿಲ್ಲ.
ಇದೇ ಹೈಜಿನ್ ಸೂತ್ರ ಗಂಡಸರು ಪಾಲಿಸಿದಾಗ
ಅವರು ಗೇ ಅಥವಾ ಹೆಣ್ಣಪ್ಪಿ.
ಅವನಿಗೆ ಗೊತ್ತಿಲ್ಲ
ಹೇಗೆ ಬಿಡು ಬೀಸಾಗಿ ಬೆಳೆದಿರುವ
ಹುಬ್ಬುಗಳಿಗೆ ಕಡಿವಾಣ ಹಾಕಲಾಗುತ್ತದೆ
ಚೆಲುವಿನ ಹೆಸರಲ್ಲಿ.
‘WOMAN ONLY’
ಎಂದು ಬೋರ್ಡ್ ಹಾಕಿಕೊಂಡಿರುವ ಬಾಗಿಲುಗಳ ಹಿಂದೆ
ನಡೆಯುವ ನರಕ ಸದೃಶ್ಯ ಪವಾಡಗಳ ಬಗ್ಗೆಯೂ
ಯಾರೂ ತುಟಿ ಬಿಚ್ಚುವುದಿಲ್ಲ.
ಅದಕ್ಕಾಗಿಯೇ
ಗಂಡಸರು ನನ್ನ ಚೆಲುವೆ ಎಂದಾಗಲೆಲ್ಲ
ಸುಮ್ಮನೆ ಮುಗುಳ್ನಗುತ್ತೇನೆ
ನನ್ನ ಚರ್ಮ ಕಿತ್ತು ಎಳೆದ ಮೇಲೆ ಉಳಿದುಕೊಂಡಷ್ಟು,
ಸವಾಲು ಹಾಕುತ್ತೇನೆ, ಸ್ವಲ್ಪ ಕಾಯಲು
ಮತ್ತೆ ನನ್ನ ದೇಹದ ಮೇಲೆ ಕೂದಲು ಬೆಳೆಯುವ ತನಕ.
– ನೈನಾ ಕಟಾರಿಯಾ
ಅನು: ಚಿದಂಬರ ನರೇಂದ್ರ

Leave a Reply

Your email address will not be published. Required fields are marked *